ಬಾರ್ಟನ್, ಡೆರೆಕ್ ಎಚ್ ಆರ್
1918. ಆಂಗ್ಲ ರಸಾಯನ ವಿಜ್ಞಾನಿ. ಅಣುವಿನ್ಯಾಸದ ತತ್ತ್ವಗಳನ್ನು ಬೆಳೆಸಿ ರಸಾಯನವಿಜ್ಞಾನಕ್ಕೆ ಅನ್ವಯಿಸಿದ್ದಕ್ಕಾಗಿ ಇವನಿಗೂ ಇದೇ ಕ್ಷೇತ್ರದಲ್ಲಿ ವ್ಯಾಪಕ ಸಂಶೋಧನೆ ನಡೆಸಿದ ಆಡ್ ಹ್ಯಾಸೆಲ್ ಎಂಬಾತನಿಗೂ ಜಂಟಿಯಾಗಿ ನೊಬೆಲ್ ಪಾರಿತೋಷಿಕ ದೊರೆತಿದೆ (1969).

ಅಗ್ರ್ಯಾನಿಕ್ ರಸಾಯನ ವಿಜ್ಞಾನದಲ್ಲಿ ಅಣು ರಚನೆಗೆ ಪ್ರಾಮುಖ್ಯ. ಒಂದು ಅಣುವಿನಲ್ಲಿ ಪರಮಾಣುಗಳು ಹೇಗೆ ಪರಸ್ಪರ ಬಂಧಿತವಾಗಿವೆ ಎಂಬುದನ್ನು ಕಾಗದದ ಮೇಲೆ ಚಿತ್ರಿಸಿದಾಗ ಅದು ಚಪ್ಪಟೆಯಾಗಿರುವಂತೆ ಭಾಸವಾಗುತ್ತದೆ. ವಾಸ್ತವವಾಗಿ ಅಣುವಿಗೆ ಮೂರು ಆಯಾಮಗಳ ಘನ ರಚನೆ ಉಂಟು. ಮೂರು ಆಯಾಮಗಳ ರಚನಾ ಸೂತ್ರಗಳನ್ನು ಹೆಚ್ಚು ಬಳಕೆಗೆ ತಂದವರು ಹ್ಯಾಸೆಲ್ ಮತ್ತು ಬಾರ್ಟನ್.

ಅಣುಗಳು ತಾಳುವ ಘನಾಕೃತಿ ರಚನೆಗೆ ವಿನ್ಯಾಸ ಎಂದು ಹೆಸರು. ಅಣುವಿನ ವಿನ್ಯಾಸಕ್ಕೂ ಅದರ ಗುಣ ಲಕ್ಷಣಗಳಿಗೂ ನಿಕಟ ಸಂಬಂಧ ಉಂಟು. ಅದರ ನಿರೂಪಣೆಯೇ ವಿನ್ಯಾಸ ವಿಶ್ಲೇಷಣೆ (ಕನ್‍ಫಾರ್ಮೇಷನ್ ಅನ್ಯಾಲಿಸಿಸ್). ಅಣುಗಳ ಘನಾಕೃತಿಯ ಬಗ್ಗೆ ಮೊತ್ತಮೊದಲು ಪ್ರಸ್ತಾವಿಸಿದಾತ ಸಾಕ್ಸೆ (1890). ಸೈಕ್ಲೊ ಹೆಕ್ಸೇನ್ ಅಣುವಿನಲ್ಲಿರುವ (ಅ6ಊ12) ಕಾರ್ಬನ್ ಪರಮಾಣುಗಳ ವೇಲೆನ್ಸಿ ಬಂಧಗಳು ತಮಗೆ ಸಹಜವಾದ ದಿಕ್ಕುಗಳಲ್ಲಿ (109028) ಅಳವಡಿಸಿಕೊಂಡರೆ ಆ ಅಣು ಎರಡು ಬೇರೆ ಬೇರೆ ಘನಾಕೃತಿಗಳನ್ನು ತಾಳುವ ಸಾಧ್ಯತೆ ಇದೆಯೆಂದು ಆತ ತೋರಿಸಿದ. ಅವನ್ನು ದೋಣಿ ಮಾದರಿ ಮತ್ತು ಕುರ್ಚಿ ಮಾದರಿ ಎಂದು ಹೆಸರಿಸಲಾಯಿತು. ಆದರೆ ಇಂಥ ಎರಡು ಸಮಾಂಗಿಗಳ ಅಸ್ತಿತ್ವದ ಬಗ್ಗೆ ನಿರ್ದಿಷ್ಟ ಪುರಾವೆಗಳಿರಲಿಲ್ಲ. ಈ ದಿಸೆಯಲ್ಲಿ ಆಡ್ ಹ್ಯಾಸೆಲ್ ಸಂಶೋಧನೆ ಪ್ರಾರಂಭಿಸಿ, ಧ್ರುವಯುಗ್ಮ ಭ್ರಮಣಾಂಕದ (ಡೈಪೋಲ್ ಮೊಮೆಂಟ್) ನಿರ್ಣಯ. ಎಕ್ಸ್‍ಕಿರಣ ವಿಶ್ಲೇಷಣೆ, ಎಲೆಕ್ಟ್ರಾನ್ ನಮನ (ಡಿಫ್ರಾಕ್ಷನ್) ಮುಂತಾದ ಆಧುನಿಕ ತಂತ್ರಗಳ ನೆರವಿನಿಂದ ಸೈಕ್ಲೊಹೆಕ್ಸೇನ್ ಅಣುವಿನ್ಯಾಸವನ್ನು ಸ್ಪಷ್ಟವಾಗಿ ಚಿತ್ರಿಸಿದ. ಆದರೆ ಆತನ ಸಂಶೋಧನೆ ಅಣುವಿನ್ಯಾಸಕ್ಕೆ ಸೀಮಿತವಾಗಿತ್ತು. ಕಾರಣ ಆತ ಭೌತ ರಸಾಯನವಿಜ್ಞಾನಿ. ಬಾರ್ಟನ್ ಆದರೋ ರಸಾಯನವಿಜ್ಞಾನದ ಆಗ್ರ್ಯಾನಿಕ್ ಶಾಕೆಯಲ್ಲಿ ಪರಿಣತ. ಆದ್ದರಿಂದ ಈತ ಹ್ಯಾಸೆಲ್ ಮಾಡಿದ ಸಂಶೋಧನೆಗಳನ್ನು ವಿಸ್ತರಿಸಿ ಅಣುವಿನ್ಯಾಸ ಮತ್ತು ಅಣುವಿನ ಕ್ರಿಯಾ ಪಟುತ್ವ (ರಿಯಾಕ್ಟಿವಿಟಿ) ಇವುಗಳಿಗೂ ಕ್ರಿಯಾವೈಖರಿಗೂ (ರಿಯಾಕ್ಷನ್ ಮೆಕ್ಯಾನಿಸಮ್) ಇರುವ ಸಂಬಂಧ ನಿರ್ಣಯಿಸಿದ.

ಈ ಮಾಹಿತಿ ಆಧರಿಸಿ ನೈಸರ್ಗಿಕ ಆಗ್ರ್ಯಾನಿಕ್ ಸಂಯುಕ್ತಗಳನ್ನು ಪ್ರಯೋಗ ಶಾಲೆಯಲ್ಲಿ ಸಂಶ್ಲೇಷಿಸಲು ಅನುಕೂಲವಾಯಿತು. ಇದಕ್ಕೆ ಒಂದು ಉದಾಹರಣೆ ಕೊಡಬಹುದು. ಮಿತಿಮೀರಿದ ರಕ್ತದ ಒತ್ತಡಕ್ಕೆ ರೆಸರ್ಪೀನ್ ಎಂಬ ಕ್ಷಾರಾಭ (ಆಲ್ಕಲಾಯ್ಡ್) ಸಿದ್ಧೌಷಧ. ಇದು ಸರ್ಪಗಂಧಿಯೆಂಬ ಮೂಲಿಕೆಯಲ್ಲಿದೆ. ವುಡ್‍ವರ್ಡ್ ಎಂಬಾತ ರೆಸರ್ಪೀನನ್ನು ಕೃತಕವಾಗಿ ಸಂಶ್ಲೇಷಿಸಿದ್ದಾನೆ. ಅದರ ಅಣುವಿನ್ಯಾಸ ಗೊತ್ತಿಲ್ಲದೆ ಹೋಗಿದ್ದರೆ ಇದು ಸಾಧ್ಯವಾಗಿರುತ್ತಿರಲಿಲ್ಲ. 

ಬಾರ್ಟನ್ ಇಂಗ್ಲೆಂಡಿನ ಇಂಪಿರಿಯಲ್ ಕಾಲೇಜ್ ಆಫ್ ಸೈನ್ಸ್ ಮತ್ತು ಟೆಕ್ನಾಲಜಿಯ ಪ್ರತಿಭಾನ್ವಿತ ವಿದ್ಯಾರ್ಥಿ. ಲಂಡನ್ ವಿಶ್ವವಿದ್ಯಾಲಯದ ಡಿ.ಎಸ್.ಸಿ. ಪದವೀಧರ. 1942-45 ಅವಧಿಯಲ್ಲಿ ಯುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದು ಅನಂತರ ಅಧ್ಯಾಪನ ವೃತ್ತಿ ಕೈಗೊಂಡಿದ್ದಾನೆ.

ಚಿತ್ರ-1

1949-50ರಲ್ಲಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಆಹ್ವಾನ ಮನ್ನಿಸಿ ಅಲ್ಲಿ ವಾಸ್ತವ್ಯ. ಅನಂತರ ಗ್ಲ್ಯಾಸ್ಗೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ. 1957ರಿಂದ ಇಂಪಿರಿಯಲ್ ಕಾಲೇಜಿನಲ್ಲಿ ಪ್ರಾಧ್ಯಾಪಕ.
(ಎಚ್.ಜಿ.ಎಸ್.;ಜಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ